ನನ್ನ ಲೇಖನಗಳು

ಹೀಗೇ ಸುಮ್ನೆ ಕುಳಿತಾಗ.... ಏನಾದ್ರೂ ಬರೆಯೋಣ ಅನ್ನಿಸ್ತು.. ಅದುಕ್ಕೆ, ಈ ಲೇಖನಗಳ ಸರಮಾಲೆ.. ಮೊದಲಿಗೆ ಒಂದೇ ಇರಬಹುದು, ಬರ್-ಬರುತ್ತಾ.. ಸರಮಾಲೆಗಳಾಗಬಹುದು...

My Photo
Name:
Location: ಸಿಂಗಾಪುರ, ಸಿಂಗಾಪುರ, Singapore

Wednesday, September 03, 2008

ಮುಂಬೈ - ಚರ್ಚ್ ಗೇಟ್ ಸುತ್ತಮುತ್ತ ಒಂದು ದಿನ

ಚರ್ಚ್ ಗೇಟ್ ಸುತ್ತಮುತ್ತಲಿನ ಪ್ರದೇಶ ಮುಂಬೈನಲ್ಲಿ ವ್ಯಾಪಾರ ವಹಿವಾಟುಗಳಿಗೆ ಹೆಸರಾದ ಸ್ಥಳ. ಒಮ್ಮೆ ನಾನು ನನ್ನಿಬ್ಬರು ಸ್ನೇಹಿತರೊಂದಿಗೆ ಕೆಲವು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಚರ್ಚ್ ಗೇಟ್ ಪ್ರದೇಶಕ್ಕೆ ಹೊರಟೆವು. ಮಧ್ಯಾಹ್ನದ ಊಟ ಮುಗಿಸಿ, ಮುಂಬೈ ಲೋಕಲ್ ರೈಲನ್ನು ಹಿಡಿದು ಚರ್ಚ್ ಗೇಟ್ ತಲುಪುವ ಹೊತ್ತಿಗೆ ಗಂಟೆ ಐದಾಗಿತ್ತು. ಸ್ನೇಹಿತರಿಂದ ವರ್ಣನೆಗಳನ್ನು ಕೇಳಿ ಇದೇ ಮೊದಲನೇ ಬಾರಿ ಚರ್ಚ್ ಗೇಟ್ ಗೆ ಬೇಟಿಯಿತ್ತಿದ್ದಿದ್ದರಿಂದ ಸ್ವಲ್ಪ ಕುತೂಹಲವಿತ್ತು. ಬಹಳಷ್ಟು ಕಟ್ಟಡಗಳು ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ ಕಟ್ಟಿದ ಕಟ್ಟಡಗಳಾಗಿದ್ದರಿಂದಲೂ, ವಿಶಾಲವಾದ ರಸ್ತೆಗಳೂ ಅದಕ್ಕೆ ತಕ್ಕುದಾದ ಫುಟ್ ಪಾತ್ ಗಳೂ ಬಹುಪಾಲು ಲಂಡನ್ ಹೋಲುತ್ತಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಕಟ್ಟಿದ ಚರ್ಚ್ ಗೇಟ್ ರೈಲು ನಿಲ್ದಾಣ ನೋಡಲು ಬಹಳ ಸುಂದರವಾಗಿ ಕಾಣುತ್ತದೆ.

ಇಲ್ಲಿ ಶಾಪಿಂಗ್ ಮಾಡಲು ಬಹಳ ಪ್ರಸಿದ್ದಿ ಪಡೆದ ಸ್ಥಳಗಳಿವೆ ಅವುಗಳಲ್ಲೊಂದು ಫ್ಯಾಶನ್ ಸ್ತ್ರೀಟ್. ಇಲ್ಲೇನೂ ಜಗಮಗಿಸುವ ಶೋರೂಂಗಳೇನೂ ಇಲ್ಲದಿದ್ದರೂ, ಕೇವಲ ಫುಟ್ ಪಾತ್ ವಾಪಾರಿಗಳಾದರೂ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುತ್ತಾರೆ. ಇಲ್ಲಿ ಕೆಳ ದರ್ಜೆಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಿಗಳೂ ಬಹಳ.

ಶಾಪಿಂಗ್ ಮುಗಿಸುವ ಹೊತ್ತಿಗೆ ರಾತ್ರಿ ಎಂಟಾಗಿತ್ತು. ಶಾಪಿಂಗ್ ಮುಗಿಸಿ ಒಂದು ಹೋಟೆಲ್ ನಲ್ಲಿ ಕುಳಿತು ಕಾಫಿ ಕುಡಿದು ಮರಳುವಾಗ, ನಮಗೊಬ್ಬ ಫುಟ್ ಪಾತ್ ವ್ಯಾಪಾರಿ ಎದುರಾದ. ಆತ ನಿಮಗೆ ಉತ್ತಮ ದರ್ಜೆಯ ನೋಕಿಯಾ ಮೊಬೈಲು ಬೇಕೆ? ಅತಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆಯೆಂದಾಗ, ಸಾಧಾರಣವಾಗಿ ನಮಗೂ ಕುತೂಹಲ. ಪಕ್ಕಕ್ಕೆ ಕರೆದು ತೋರಿಸುತ್ತಾನೆಂದಾಗ, ಹಿಂಬಾಲಿಸಿದೆವು. ಆತನ ಕೈಯಲ್ಲಿ ಕೆಂಪು ಬಣ್ಣದ ಪೇಪರ್ ನಲ್ಲಿ ಸುತ್ತಿದ ಎನ್-೯೫ ಕ್ರಮಾಕದ ನೋಕಿಯಾ ಮೊಬೈಲು. ಕೇವಲ ಎಂಟೂವರೆ ಸಾವಿರ ರೂಪಾಯಿಗೆ ಸಿಗುತ್ತದೆಂದಾಗ, ಆಶ್ಚರ್ಯದ ಜೊತೆಗೆ ಅನುಮಾನವೂ ಅಯಿತು. ನಮ್ಮೆಲ್ಲರಿಗೂ ಆತನ ಕೈಯಲ್ಲಿನ ಮೊಬೈಲು ಬಹಳ ಇಷ್ಟವಾಯಿತು. ಕೈಯಲ್ಲಿ ತೆಗೆದುಕೊಂಡು ಸರಿಯಾಗಿ ಕೆಲಸ ಮಾಡುತ್ತದೆಂದು ಖಾತ್ರಿಪಡಿಸಿಕೊಂಡೆವು. ಇದರಲ್ಲೇನೂ ಮೋಸ ಇಲ್ಲವೆಂದು ಖಚಿತಪಡಿಸಿಕೊಂಡು ಚೌಕಾಸಿಗೆ ಸಿದ್ದವಾದೆವು. ಕೊನೆಗೆ ಮೂರು ಸಾವಿರಕ್ಕೆ ಚೌಕಾಸಿ ಮಾಡಿ ಕೆಂಪು ಬಣ್ಣದ ಪೇಪರ್ ನಲ್ಲಿ ಸುತ್ತಿದ ಪೊಟ್ಟಣವನ್ನು ಜೇಬಿಗಿಳಿಸಿ ಸರಸರನೆ ನಡೆದೆವು.

ಮನೆಗೆ ಮರಳುವಷ್ಟರಲ್ಲಿ ರಾತ್ರಿ ಹತ್ತಾಗಿತ್ತು. ಮನೆಯಲ್ಲಿದ್ದ ಇತರ ಸ್ನೇಹಿತರೊಂದಿಗೆ ಆ ಮೊಬೈಲ್ ಮಾರಾಟ ಮಾಡಿದ ಮುಟ್ಟಾಳನನ್ನು ಗೇಲಿ ಮಾಡುತ್ತಾ ಬೇರೆಯವರಾಗಿದ್ದರೆ ಇನ್ನೂ ಹೆಚ್ಚು ಹಣ ಕೊಡುತ್ತಿದ್ದರೇನೋ ಎಂದುಕೊಂಡು ಕೆಂಪು ಬಣ್ಣದ ಪೇಪರ್ ನಲ್ಲಿ ಸುತ್ತಿದ ಪೊಟ್ಟಣವನ್ನು ಬಿಚ್ಚಿ ತೋರಿಸಿದೆವು.

ತೋರಿಸಿದರೆ ಅಲ್ಲೇನಿದೆ? ಮೊಬೈಲ್ ಆಕಾರಕ್ಕೆ ಸರಿಯಾಗಿ ಕತ್ತರಿಸಿದ "501 ಬಾರ್ ಸೋಪು"!

Friday, June 23, 2006

ಫುಟ್ಬಾಲ್ ನ ದಂತಕಥೆ: ಡಿಯೇಗೋ ಮರಡೋನಾ

ಜನನ: ೧೯೬೦ ಅಕ್ಟೋಬರ್ ೩೦
ಸ್ಥಳ: ಬ್ಯೂನಸ್ ಐರ್ಸ್ ನಗರದ ಹೊರವಲಯದ ವಿಲ್ಲಾ ಫಿಯೋರಿಟೊಫುಟ್ಬಾಲ್ ಪ್ರೇಮಿಗಳ ದಂತಕಥೆ, ಡಿಯೇಗೋ ಅರ್ಮಾಂಡೊ ಮರಡೋನಾ, ವೃತ್ತಿಜೀವನದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ತನ್ನ ಹದಿನಾರನೆಯ ವಯಸ್ಸಿನಲ್ಲಿ. ೧೯೭೫ರಲ್ಲಿ ಫುಟ್ಬಾಲ್ ಗೆ ಪಾದಾರ್ಪಣೆ ಮಾಡಿದ ಮರಡೋನಾ, ತನ್ನ ಕೊನೆಯ ಪಂದ್ಯದಲ್ಲಿ ಆಡಿದ್ದು ೨೦೦೧ರ ನವಂಬರ್ ನಲ್ಲಿ! ಜಗತ್ತಿಗೆ ೨೫ ವರ್ಷಗಳ ಸುಧೀರ್ಘ ಕಾಲ ಸಲ್ಲಿಸಿದ ಈತನ ಸೇವೆ ಎಷ್ಟು ಕೊಂಡಾಡಿದರೂ ಸಾಲದು. ತನ್ನ ಹತ್ತೊಂಬತ್ತನೆಯ ವಯಸ್ಸಿನಲ್ಲೇ ಸ್ಪೈನ್ ದೇಶದ ಪರವಾಗಿ ಆಡಲು ೧೨ ಮಿಲಿಯನ್ ಡಾಲರ್ ಗಳಿಗೆ ೬ ವರ್ಷಗಳ ಕಾಲ ಆಡುವ ಒಪ್ಪಂದ ಮಾಡಿಕೊಂಡಿದ್ದ. ಈ ಒಪ್ಪಂದ ಆಗಿನ ಕಾಲದಲ್ಲೇ ಒಂದು ಐತಿಹಾಸಿಕ ದಾಖಲೆಯಗಿತ್ತು. ಕೇವಲ ೫.೮ ಅಡಿ (೧೬೮ ಸೆಂ.ಮೀ) ಉದ್ದ, ೭೮ ಕಿಲೋ ತೂಕವಿದ್ದ ಈತ, ತನ್ನ ಬಾಹು,ತೊಡೆಗಳಲ್ಲಿದ್ದ ಮಿಂಚಿನ ಶಕ್ತಿಯಿಂದ ಪ್ರಪಂಚವನ್ನೇ ಮೋಡಿ ಮಾಡಿದ್ದ.

ಈತನ ಅವಿಸ್ಮರಣೀಯ ಆಟ, ೧೯೮೬ ರಲ್ಲಿ ವಿಶ್ವಕಪ್ ಫೈನಲ್ಸ್ ನಲ್ಲಿ ಜರ್ಮನಿಯ ವಿರುದ್ದ ೩-೨ ಗೋಲುಗಳೊಂದಿಗೆ ತಂದಿತ್ತ ಜಯ ಅರ್ಜೆಂಟೈನಾಗೆ ವಿಶ್ವಕಪ್ ಕಿರೀಟ ತೊಡಿಸಿತ್ತು. ನಂತರದ ಅವಿಸ್ಮರಣೀಯ ಪಂದ್ಯ, ೧೯೯೦ರ ವಿಶ್ವಕಪ್ ಫೈನಲ್ಸ್ ನಲ್ಲಿ ಜರ್ಮನಿಯ ವಿರುದ್ದ ೧-೦ ಗೋಲಿನ ಅಂತರದ ಸೋಲು ಅರ್ಜೆಂಟೈನಾಕ್ಕೆ ವಿಶ್ವದ ಎರಡನೆ ಅತ್ಯುತ್ತಮ ತಂಡದ ಸ್ಥಾನ ತಂದಿತ್ತದ್ದು.

ಅರ್ಜೆಂಟೈನಾ ಪರವಾಗಿ ೨೪೧ ಪಂದ್ಯಗಳು, ಬಾರ್ಸಿಲೋನಾ(ಸ್ಪೈನ್) ಪರವಾಗಿ ೫೮ ಪಂದ್ಯಗಳು, ನಾಪೊಲಿ(ಇಟಲಿ) ಪರವಾಗಿ ೨೫೯ ಪಂದ್ಯಗಳು, ಸೆವಿಲ್ಲಾ(ಸ್ಪೈನ್) ಪರವಾಗಿ ೨೯ ಹಾಗೂ ೧೦೫ ಪಂದ್ಯಗಳನ್ನು ಅರ್ಜೆಂಟೈನಾ ರಾಷ್ಟ್ರಮಟ್ಟದಲ್ಲಿ ಆಡಿದ ಈತ ಒಟ್ಟು ಆಡಿದ್ದು ೬೯೨ ಅಧಿಕೃತ ಪಂದ್ಯಗಳು! ಈ ೬೯೨ ಪಂದ್ಯಗಳಲ್ಲಿ ಗಳಿಸಿದ್ದು ೩೫೩ ಗೋಲುಗಳು!

ಇಂಗ್ಲೆಂಡ್ ವಿರುದ್ದದ ಪಂದ್ಯದಲ್ಲಿ, ಕ್ರೀಡಾಂಗಣದ ಮುಕ್ಕಾಲು ಭಾಗದಿಂದ ಇಂಗ್ಲೆಂಡ್ ನ ಎಲ್ಲ ಹತ್ತೂ ಜನ ಆಟಗಾರರಿಗೆ ಚಳ್ಳೆಹಣ್ಣು ತಿನ್ನಿಸಿ ಚೆಂಡನ್ನು ಮುನ್ನಡೆಸಿಕೊಂಡು ಹೊಡೆದ ಗೋಲು "ಶತಮಾನದ ಗೋಲು" ಎಂದು FIFA ಘೋಷಿಸಿತ್ತು.

೧೯೯೧ರಲ್ಲಿ ಮಾದಕ ದ್ರವ್ಯ ಸೇವನೆ ಪರೀಕ್ಷೆಗೊಳಪಟ್ಟು, ಮಾದಕವಸ್ತು ಸೇವನೆ ದೃಡಪಟ್ಟು ೧೫ ತಿಂಗಳ ನಿಷೇಧಕ್ಕೊಳಗಾಗಿದ್ದರೂ, ೧೯೯೪ರಲ್ಲಿ ಮತ್ತೆ ಅರ್ಜೆಂಟೈನಾ ತಂಡದ ನಾಯಕನಾಗಿ ವಿಶ್ವಕಪ್ ಗೆ ಪ್ರವೇಶ ಪಡೆದ ಆದರೆ ಎರಡೇ ಪಂದ್ಯಗಳ ನಂತರ ಮತ್ತೆ ನಿಷೇದಕ್ಕೊಳಗಾದ. ಹೀಗೆ ೧೯೮೬ ರಲ್ಲಿ ವಿಶ್ವಚಾಂಪಿಯನ್ ಪಟ್ಟ ಅಲಂಕರಿಸಿದ ಈತ, ೧೯೭೯, ೧೯೮೦, ೧೯೮೬, ೧೯೮೯, ೧೯೯೦ ಹಾಗೂ ೧೯೯೨ರಲ್ಲಿ ದಕ್ಷಿಣ ಅಮೆರಿಕಾದ ಅತ್ಯುತ್ತಮ ಆಟಗಾರನೆಂಬ ಕೀರ್ತಿಗೆ ಪಾತ್ರನಾಗಿದ್ದ. ಕಾಲು ಶತಮಾನದ ಫುಟ್ಬಾಲ್ ಜೀವನದುದ್ದಕ್ಕೂ ಹಲವರಿಗೆ ಮಾದರಿಯಾಗಿದ್ದುದಲ್ಲದೆ ಫುಟ್ಬಾಲ್ ಪ್ರಪಂಚದಲ್ಲಿ ಸಾರ್ವಕಾಲಿಕ ಶ್ರೇಷ್ಟ ಆಟಗಾರನಾಗಿ ಮೆರೆದವನು ಇಂದಿಗೂ ಅನೇಕ ಖ್ಯಾತ ಫುಟ್ಬಾಲ್ ತಾರೆಯರಿಗೆ ಸ್ಪೂರ್ತಿ.

ಮರಡೊನಾ ಹೊಡೆದ ಶತಮಾನದ ಗೋಲಿನ ದೃಶ್ಯ ಚಿತ್ರಕ್ಕೆ ಈ ತಾಣಕ್ಕೆ ಬೇಟಿ ಕೊಡಿ:
ತಾಣ ೧
ಮರಡೊನಾ ಕೈ ನಿಂದ ಹೊಡೆದ ಅದೃಷ್ಟದ ಗೋಲಿನ ದೃಶ್ಯ ಚಿತ್ರಕ್ಕೆ ಈ ತಾಣಕ್ಕೆ ಬೇಟಿ ಕೊಡಿ:
ತಾಣ ೨