ನನ್ನ ಲೇಖನಗಳು

ಹೀಗೇ ಸುಮ್ನೆ ಕುಳಿತಾಗ.... ಏನಾದ್ರೂ ಬರೆಯೋಣ ಅನ್ನಿಸ್ತು.. ಅದುಕ್ಕೆ, ಈ ಲೇಖನಗಳ ಸರಮಾಲೆ.. ಮೊದಲಿಗೆ ಒಂದೇ ಇರಬಹುದು, ಬರ್-ಬರುತ್ತಾ.. ಸರಮಾಲೆಗಳಾಗಬಹುದು...

My Photo
Name:
Location: ಸಿಂಗಾಪುರ, ಸಿಂಗಾಪುರ, Singapore

Wednesday, September 03, 2008

ಮುಂಬೈ - ಚರ್ಚ್ ಗೇಟ್ ಸುತ್ತಮುತ್ತ ಒಂದು ದಿನ

ಚರ್ಚ್ ಗೇಟ್ ಸುತ್ತಮುತ್ತಲಿನ ಪ್ರದೇಶ ಮುಂಬೈನಲ್ಲಿ ವ್ಯಾಪಾರ ವಹಿವಾಟುಗಳಿಗೆ ಹೆಸರಾದ ಸ್ಥಳ. ಒಮ್ಮೆ ನಾನು ನನ್ನಿಬ್ಬರು ಸ್ನೇಹಿತರೊಂದಿಗೆ ಕೆಲವು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಚರ್ಚ್ ಗೇಟ್ ಪ್ರದೇಶಕ್ಕೆ ಹೊರಟೆವು. ಮಧ್ಯಾಹ್ನದ ಊಟ ಮುಗಿಸಿ, ಮುಂಬೈ ಲೋಕಲ್ ರೈಲನ್ನು ಹಿಡಿದು ಚರ್ಚ್ ಗೇಟ್ ತಲುಪುವ ಹೊತ್ತಿಗೆ ಗಂಟೆ ಐದಾಗಿತ್ತು. ಸ್ನೇಹಿತರಿಂದ ವರ್ಣನೆಗಳನ್ನು ಕೇಳಿ ಇದೇ ಮೊದಲನೇ ಬಾರಿ ಚರ್ಚ್ ಗೇಟ್ ಗೆ ಬೇಟಿಯಿತ್ತಿದ್ದಿದ್ದರಿಂದ ಸ್ವಲ್ಪ ಕುತೂಹಲವಿತ್ತು. ಬಹಳಷ್ಟು ಕಟ್ಟಡಗಳು ಬ್ರಿಟಿಷರ ಆಳ್ವಿಕೆಯಲ್ಲಿದ್ದಾಗ ಕಟ್ಟಿದ ಕಟ್ಟಡಗಳಾಗಿದ್ದರಿಂದಲೂ, ವಿಶಾಲವಾದ ರಸ್ತೆಗಳೂ ಅದಕ್ಕೆ ತಕ್ಕುದಾದ ಫುಟ್ ಪಾತ್ ಗಳೂ ಬಹುಪಾಲು ಲಂಡನ್ ಹೋಲುತ್ತಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಕಟ್ಟಿದ ಚರ್ಚ್ ಗೇಟ್ ರೈಲು ನಿಲ್ದಾಣ ನೋಡಲು ಬಹಳ ಸುಂದರವಾಗಿ ಕಾಣುತ್ತದೆ.

ಇಲ್ಲಿ ಶಾಪಿಂಗ್ ಮಾಡಲು ಬಹಳ ಪ್ರಸಿದ್ದಿ ಪಡೆದ ಸ್ಥಳಗಳಿವೆ ಅವುಗಳಲ್ಲೊಂದು ಫ್ಯಾಶನ್ ಸ್ತ್ರೀಟ್. ಇಲ್ಲೇನೂ ಜಗಮಗಿಸುವ ಶೋರೂಂಗಳೇನೂ ಇಲ್ಲದಿದ್ದರೂ, ಕೇವಲ ಫುಟ್ ಪಾತ್ ವಾಪಾರಿಗಳಾದರೂ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುತ್ತಾರೆ. ಇಲ್ಲಿ ಕೆಳ ದರ್ಜೆಯ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಿಗಳೂ ಬಹಳ.

ಶಾಪಿಂಗ್ ಮುಗಿಸುವ ಹೊತ್ತಿಗೆ ರಾತ್ರಿ ಎಂಟಾಗಿತ್ತು. ಶಾಪಿಂಗ್ ಮುಗಿಸಿ ಒಂದು ಹೋಟೆಲ್ ನಲ್ಲಿ ಕುಳಿತು ಕಾಫಿ ಕುಡಿದು ಮರಳುವಾಗ, ನಮಗೊಬ್ಬ ಫುಟ್ ಪಾತ್ ವ್ಯಾಪಾರಿ ಎದುರಾದ. ಆತ ನಿಮಗೆ ಉತ್ತಮ ದರ್ಜೆಯ ನೋಕಿಯಾ ಮೊಬೈಲು ಬೇಕೆ? ಅತಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆಯೆಂದಾಗ, ಸಾಧಾರಣವಾಗಿ ನಮಗೂ ಕುತೂಹಲ. ಪಕ್ಕಕ್ಕೆ ಕರೆದು ತೋರಿಸುತ್ತಾನೆಂದಾಗ, ಹಿಂಬಾಲಿಸಿದೆವು. ಆತನ ಕೈಯಲ್ಲಿ ಕೆಂಪು ಬಣ್ಣದ ಪೇಪರ್ ನಲ್ಲಿ ಸುತ್ತಿದ ಎನ್-೯೫ ಕ್ರಮಾಕದ ನೋಕಿಯಾ ಮೊಬೈಲು. ಕೇವಲ ಎಂಟೂವರೆ ಸಾವಿರ ರೂಪಾಯಿಗೆ ಸಿಗುತ್ತದೆಂದಾಗ, ಆಶ್ಚರ್ಯದ ಜೊತೆಗೆ ಅನುಮಾನವೂ ಅಯಿತು. ನಮ್ಮೆಲ್ಲರಿಗೂ ಆತನ ಕೈಯಲ್ಲಿನ ಮೊಬೈಲು ಬಹಳ ಇಷ್ಟವಾಯಿತು. ಕೈಯಲ್ಲಿ ತೆಗೆದುಕೊಂಡು ಸರಿಯಾಗಿ ಕೆಲಸ ಮಾಡುತ್ತದೆಂದು ಖಾತ್ರಿಪಡಿಸಿಕೊಂಡೆವು. ಇದರಲ್ಲೇನೂ ಮೋಸ ಇಲ್ಲವೆಂದು ಖಚಿತಪಡಿಸಿಕೊಂಡು ಚೌಕಾಸಿಗೆ ಸಿದ್ದವಾದೆವು. ಕೊನೆಗೆ ಮೂರು ಸಾವಿರಕ್ಕೆ ಚೌಕಾಸಿ ಮಾಡಿ ಕೆಂಪು ಬಣ್ಣದ ಪೇಪರ್ ನಲ್ಲಿ ಸುತ್ತಿದ ಪೊಟ್ಟಣವನ್ನು ಜೇಬಿಗಿಳಿಸಿ ಸರಸರನೆ ನಡೆದೆವು.

ಮನೆಗೆ ಮರಳುವಷ್ಟರಲ್ಲಿ ರಾತ್ರಿ ಹತ್ತಾಗಿತ್ತು. ಮನೆಯಲ್ಲಿದ್ದ ಇತರ ಸ್ನೇಹಿತರೊಂದಿಗೆ ಆ ಮೊಬೈಲ್ ಮಾರಾಟ ಮಾಡಿದ ಮುಟ್ಟಾಳನನ್ನು ಗೇಲಿ ಮಾಡುತ್ತಾ ಬೇರೆಯವರಾಗಿದ್ದರೆ ಇನ್ನೂ ಹೆಚ್ಚು ಹಣ ಕೊಡುತ್ತಿದ್ದರೇನೋ ಎಂದುಕೊಂಡು ಕೆಂಪು ಬಣ್ಣದ ಪೇಪರ್ ನಲ್ಲಿ ಸುತ್ತಿದ ಪೊಟ್ಟಣವನ್ನು ಬಿಚ್ಚಿ ತೋರಿಸಿದೆವು.

ತೋರಿಸಿದರೆ ಅಲ್ಲೇನಿದೆ? ಮೊಬೈಲ್ ಆಕಾರಕ್ಕೆ ಸರಿಯಾಗಿ ಕತ್ತರಿಸಿದ "501 ಬಾರ್ ಸೋಪು"!